Thursday, July 22, 2010

೨. ಜೀ, ಘಾ ಮತ್ತು ಉಪ್ಪಿಟ್ಟು

ಶ್ರೀಮಾನ್ ಜಿ ಗೊತ್ತಲ್ಲ?

ಅದೇ ಸ್ವಾಮಿ, ನಾಯ್ನ್ಟೀನ್ ಸೆವೆನ್ಟಿಯಲ್ಲಿ ಮದುವೆಗೆ ಹೊಲಿಸಿದ ಕೋಟು ಹಾಕ್ಕೊಂಡು, ಅದರೊಳಗೆ ತೂರಲಾರದ ಹೊಟ್ಟೆಯನ್ನು, ಹಾವಿನ ಉದ್ದಕ್ಕೆ ಹೊಟ್ಟೆ ಇಳಿಸಿಕೊಳ್ಳಲು ಪರದಾಡುವ ಗಣಪನ ಹಾಗೆ, ಇರುಕಿಸಿಕೊಂಡು, ನಕ್ಷತ್ರ ಕಾಣುವ ಛತ್ರಿ ಹಿಡಿದು ಬೆಳಿಗ್ಗೆ- ಮಧ್ಯಾಹ್ನ - ಸಂಜೆ ಗಾಂಧೀ ಬಜಾರಿಗೆ ವಾಕಿಂಗ್
ಹೋಗಿ, ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಮೆದ್ದು, ಸಿಗುವ ಓರಗೆಯ ಗೆಳೆಯರ ಹತ್ತಿರ ಅಮಿತಾಬ್ ಬಚ್ಚನ್ ಮಾಡಿದ ಹಳೇ ಸಿನಿಮಾಗಳ ಬಗ್ಗೆ ಮಾತಾಡಿ, ಮನೆಗೆ ಬಂದು ಕಾಫಿ ಕುಡಿದು.... ಅಂದರೆನಿಮಗೆ ಗೊತ್ತಾಗಿರಬೇಕು!

ಇವರ ಯಾರೋ ಮುತ್ತಾತ ಮೊಘಲರ ಆಸ್ಥಾನದಲ್ಲಿ ವಿದ್ವಾನ್ ಆಗಿದ್ರಂತೆ. ಇನ್ನೂ ಸ್ಪಷ್ಟವಾಗಿ ಹೇಳಬೇಕಂದ್ರೆ, ತುಘಲಕ್ ಮಹಾರಾಜರ ಆಸ್ಥಾನದಲ್ಲಿ ಇವರ ಪಿಜ್ಜನ ಅಜ್ಜ ಮಹಾ ಮಾಂದಲೀಕರಾಗಿದ್ದರಂತೆ. ಅವರ ಕೆಲಸ ಏನು ಅಂದರೆ: ಮಹಾರಾಜರು ಹೋದ ಕಡೆ ಗಾಳಿ ಬೀಸುವುದು, ಹೇಳಿದ್ದನ್ನು ಶಿರಸಾ ವಹಿಸಿ ಕೇಳಿಕೊಂಡು ಸಿಕ್ಕವರ ತಲೆ ತೆಗೆಯುವುದು, ರಾಜರಿಗಾಗದವರ ಕಾಲೆಳೆಯುವುದು, ವೈರಿಗಳ ಮಾತುಕತೆ ಕದ್ದಾಲಿಸುವುದು - ಹೀಗೆ.. ಎಲ್ಲ ರಾಜತಾಂತ್ರಿಕ ಕೆಲಸಗಳನ್ನು ಬಹಳ ಎಚ್ಚರದಿಂದ ಮಾಡಿ ಸಕಲ ಗೌರವಾದರ ಪಡೆದಿದ್ದರು.

ತುಘ್ಲಕ್ ದಿಲ್ಲಿ ಬಿಟ್ಟು ಹೋದಾಗ ಹೇಳಿದನಂತೆ : "ಏನ್ರೀ ಮಂತ್ರಿಗಳೇ, ದಿಲ್ಲಿ ಸರಿಯಿಲ್ಲ. ದೌಲತಾಬಾದಿಗೆ ಹೋಗೋಣ. ಏನಂತೀರಿ?"

ಇವರು: "ಹಾನ್ಜೀ"

ತುಘಲಕ್ : " ಇಲ್ಲಿ ಯಾರ್ಗೂ ಬುದ್ಧಿ ಇಲ್ಲ. ಏನೇ ಹೇಳ್ರೀ, ನನ್ನ ಮಾತನ್ನ, ಮನಸನ್ನ ಅರ್ಥ ಮಾಡಿಕೊಂಡವರು ನೀವೊಬ್ಬರೇ"

ಇವರು: "ಹಾನ್ಜೀ"

ಹೀಗೆ ಆಗಿ, ರಾಜರು ದೌಲತಾಬಾದಿಗೆ ಹೋಗಿ ಅಲ್ಲಿ ಸರಿಬರದೆ ವಾಪಸು ಹೊರಟಾಗ ಹೇಳಿದರಂತೆ: "ಏನೇ ಹೇಳ್ರೀ, ದೌಲತಾಬಾದು ಸರಿಯಿಲ್ಲ. ದಿಲ್ಲಿನೆ ವಾಸಿ. ವಾಪಸ್ ಹೋಗೋಣ, ಏನಂತೀರಿ?"

ಇವರು: "ಹಾನ್ಜೀ"

ತುಘಲಕ್: "ಇಲ್ಲಿ ಯಾರ್ಗೂ ಬುದ್ಧಿ ಇಲ್ಲ. ನನ್ನನ್ನು ಹುಚ್ಚ ಅಂತಾರೆ. ನೀವೊಬ್ಬರೇ ಕಾಣ್ರೀ, ನನ್ನ ಮಾತನ್ನ, ಮನಸನ್ನ...."

ಇವರು: "ಹಾನ್ಜೀ"

- ಹೀಗೆ, ರಾಜಮಹಾರಾಜರು ಅವರವರ ಅಂತರಂಗದ ಮಾತುಗಳನ್ನು ಹಂಚಿಕೊಳ್ಳುವಷ್ಟು ಶ್ರೀಮಾನ್-ಜಿ ಗಳ ಮುತ್ತಾತ ಬೆಳೆದಿದ್ದರು. ಜೀ ಜೀ ಅನ್ನುತ್ತಲೇ ದೊಡ್ಡ ದೊಡ್ಡ ರಾಜವಂಶಗಳನ್ನು ನಿರ್ವಂಶ ಮಾಡಿ ಹೆಸರುವಾಸಿಯಾದರು. ಇನ್ನು ಅವರ ಮಕ್ಕಳೆಲ್ಲ ಸ್ವತಂತ್ರ ಭಾರತದ ಕಾಂಗ್ರೆಸ್ ಸರಕಾರಗಳಲ್ಲಿ ಕಾಲಕಾಲಕ್ಕೆ ಹಾನ್ಜೀ ಮಂತ್ರಿ - ಹೂನ್ಜೀ ಮಂತ್ರಿಗಳಾಗಿ ದೊಡ್ಡ ದೊಡ್ಡ ಹೆಸರು ಮಾಡಿದರು. ಆದರೆ, ಮನುಶ್ಯನಿಗೆಕೋ ಗ್ರಹಚಾರ ಅಷ್ಟೊಂದು ಕೈ ಹಿಡಿಯದೆ ರಾಜಕೀಯ ಪ್ರವೇಶ ಸಾಧ್ಯವಾಗಲಿಲ್ಲ. ಸತ್ಯ, ನಿಷ್ಠೆ, ಪ್ರಾಮಾಣಿಕತೆ ಅಂತ ಕೆಲವು ಕೆಲಸಕ್ಕೆ ಬಾರದ ಗುಣಗಳು ಬೆಳೆದದ್ದರಿಂದ ರಾಜಕೀಯ ಬೆಳವಣಿಗೆ ಕುಗ್ಗಿ, ಶ್ರೀಮಾನ್-ಜಿ, ಭಾರತ ಗಣತಂತ್ರದ ಒಬ್ಬ ನಿಷ್ಪಾಪಿ ನಿಷ್ಪ್ರಯೋಜಕ ನಾಗರಿಕನಾಗಿ ಬಿಟ್ಟರು. ಆದರೂ, ಜೀ ಜೀ ವಂಶದ ಕುಡಿಯಲ್ಲವೇ, ಹಾಗಾಗಿ ಜೀ ಅಂತ ಇವರ ಸಾಮಾನ್ಯ ಹೆಸರಿಗೂ ಒಂದು ಬಾಲ ಸೇರ್ಕೊಂಡುಬಿಟ್ಟಿದೆ.

ಶ್ರೀಮಾನ್-ಜಿ ಅವರ ಬೆಳಗ್ಗಿನ ಬ್ರೇಕ್ ಫಾಸ್ಟು : ಸಜ್ಜಿಗೆ ಬಜಿಲ್. ಅರ್ಥಾತ್ ನಾವೆಲ್ಲಾ ಪ್ರೀತಿಯಿಂದ ಕರೆಯುವ ಉಪ್ಮಾ ಅವಲಕ್ಕಿ!
ಉಪ್ಮಾ ಯಾಕೆಂದರೆ, ಅದು ಬಹಳ ಪುರಾತನ ತಿಂಡಿ ಅಂತ ಜೀಗಳ ನಂಬಿಕೆ. ಅದಕ್ಕೆ ಆಧಾರವೂ ಇದೆ ಅನ್ನಿ! "ಉಪಮಾ ಕಾಳಿದಾಸಸ್ಯ" ಅಂತ ಹೇಳಿಲ್ಲವೇ? ಅಂದರೆ, ಕಾಳಿದಾಸನ ಕಾಲದಲ್ಲೇ ಇದು ಬಹಳ ಹೆಸರು ಪಡೆದಿತ್ತು. ಕಾಳಿದಾಸನ ಉಪ್ಪಿಟ್ಟೂ ಅಂದ್ರೆ ಉಪ್ಪಿಟ್ಟು ಅಂತ ಮೌರ್ಯ ವಂಶದ ರಾಜರುಗಳೇ ಹಾಡಿ ಹೊಗಳ್ತಾ ಇದ್ದರು ಎನ್ನುವುದು ಜೀಗಳ ಪಿ ಹೆಚ್ ಡಿ ಸಂಶೋಧನೆ.

ಇನ್ನೊಂದು ಕಾರಣ ಏನೆಂದರೆ, ಅದಕ್ಕೂ ಉಡುಪಿಗೂ ಇರುವ ನಂಟು. ಉಡುಪಿಯವರು ನೋಡಿ, ಯಾವುದೊ ಕಾಲದಲ್ಲಿ ಊರುಬಿಟ್ಟು ಘಟ್ಟ ಹತ್ತಿ ಹೋದಲ್ಲೆಲ್ಲ ಹೋಟೆಲು ತೆರೆದು ಉಪ್ಪಿಟ್ಟು-ಅವಲಕ್ಕಿ ಮಾರಿದರು. ನೀಲ್ ಆರ್ಮಸ್ಟ್ರಾಂಗ್ ಅಂತ ಒಬ್ಬರು ಪುಣ್ಯಾತ್ಮ ಚಂದ್ರನಲ್ಲಿ ಹೋಗಿ ಇಳಿದು ಹಸಿದುಕೊಂಡು ಕೂತಿದ್ದಾಗ, "ನಿಮಗೆ ಸಜ್ಜಿಗೆ ಬೇಕೋ ಬಜಿಲ್ ಬೇಕೋ?" ಅಂತ ವಿಚಾರಿಸಿಕೊಂಡವರು ಉಡುಪಿ ಭಟ್ರುಗಳೇ ಅಂತೆ. ಜೀಗಳಿಗೂ ಪಾಪ, ಇಂಥವರ ಮೇಲೆ ವಿಪರೀತ ಪ್ರೀತಿ, ವ್ಯಾಮೋಹ. ಹಾಗಾಗಿ, ಅವರ ಗೌರವಾರ್ಥವಾಗಿ ಇವರು ಎರಡು ತಿಂಡಿಗಳನ್ನು ಬೆಳಗಿನ ಉಪಾಹಾರದ ತಟ್ಟೆಗೆ ಆಯ್ಕೆ ಮಾಡ್ಕೊಂಡಿದಾರೆ. ಅಲ್ಲದೆ ಇವರ ಗುರುಗಳು ಎಚ್ಚೆನ್ ಬೇರೆ, ಯಾವಾಗಲೂ ಹೇಳ್ತಿದ್ದರಂತೆ: "ನಾನು ಅಮೆರಿಕೆಯಲ್ಲಿ ನಾಲ್ಕು ವರ್ಷ ಡಾಕ್ಟರೇಟ್ ಮಾಡ್ತಿದ್ದಾಗ, ನಿಷ್ಠೆಯಿಂದ ದಿನವೂ ಮಾಡ್ತಿದ್ದದ್ದು ಎರಡೇ ಕಣಯ್ಯಾ: ಸಂಶೋಧನೆ ಮತ್ತು ಉಪ್ಪಿಟ್ಟು!" ಅಂತ.

ಇನ್ನು ಯಾರಿಗೂ ಗೊತ್ತಿಲ್ಲದ ಗುಟ್ಟಿನ ಸಂಗತಿ ಏನೆಂದರೆ: ಅವರ ತಟ್ಟೆಗೆ ಎರಡು ಐಟಂಗಳು ಬಂದಿರುವುದು ಅವರಿಗೆ ಇದರ ಮೇಲೆ ಪ್ರೀತಿ ಅಂತಲ್ಲ. ಹೆಸರಿನ ಮೇಲಿನ ಅಭಿಮಾನದಿಂದ ಅಂತ. ಅರ್ಥ ಆಗಿಲ್ವೆ? "ಸಜ್ಜಿಗೆ ಬಜಿಲ್" - ಎರಡು ಶಬ್ದಗಳಲ್ಲಿ ಒತ್ತಕ್ಷರವೂ ಸೇರಿ ಮೂರು ಸಲ "ಜೀ" ಬಂತು. ಅಂದ ಮೇಲೆ, ಅದು ಶ್ರೀಮಾನ್-ಜೀಗಳ ಹಿಟ್ ಲಿಸ್ಟಿನಲ್ಲಿ ಸೇರದಿರಲು ಹೇಗೆ ಸಾಧ್ಯ!

ಜೀಗಳ ಗಳಸ್ಯ ಕಂಠಸ್ಯ ಗೆಳೆಯ ಘಾ ಅಪ್ಪಿತಪ್ಪಿಯೂ ಜೀ ಮನೆಗೆ ಬೆಳಗ್ಗೆ ಹೋಗುವುದಿಲ್ಲ. ಹಾಗೇನಾದರೂ ಜೀ ಮನೆ ಮುಂದೆ ಹಾದುಹೊಗಬೇಕಾಗಿ ಬಂದರೆ ತಲೆತಪ್ಪಿಸಿಕೊಂಡು, ಬಳಸು ದಾರಿಯಲ್ಲಿ ಕಾಲೆಳೆದುಕೊಂಡು ಪರಾರಿಯಾಗುತ್ತಾರೆ. ಕಾರಣ ಇಷ್ಟೇ: ಅವರಿಗೂ ಉಪ್ಪಿಟ್ಟಿಗೂ - ಯಡ್ಡಿ ಸಿದ್ದು ಇದ್ದ ಹಾಗೆ. "ಏನಯ್ಯ ಬೆಳಬೆಳಗ್ಗೆಕಾಂಕ್ರೀಟು ಮುಕ್ತೀಯ! ಅದೂ ಒಂದು ತಿಂಡಿಯೇ?" ಅಂತ ಉಡಾಫೆ ಹೊಡೆಯುತ್ತಾರೆ ಅವರು. ಅವರು ಉಪ್ಪಿಟ್ಟು ತಿಂದರೆ, ಅದು ಗಂಟಲು - ಜಠರ - ಕರುಳುಗಳಲ್ಲಿ ಗಾರೆಯಂತೆ ಅಂಟಿಕೊಂಡು ದಿನವಿಡೀ ಪಡಬಾರದ ವೇದನೆ ಕೊಡುತ್ತಂತೆ. ಅದೂ ಅಲ್ಲದೆ ಅವರು ತರುಣರಾಗಿದ್ದಾಗ ಹೆಣ್ಣು ನೋಡಲು ಹೋದ ಕಡೆಯಲ್ಲೆಲ್ಲ್ಲ ಉಪ್ಪಿಟ್ಟು ತಿಂದೂ ತಿಂದೂವರ ರುಚಿಗ್ರಂಥಿಗಳೇ ಕೆಟ್ಟು ಹೋಗಿದ್ದವಂತೆ. ಮದುವೆಯಾದ ಮೇಲೆ ಹೆಂಡತಿ ಮೊತ್ತಮೊದಲ ಬಾರಿಗೆ ಅಡುಗೆ ಮನೆಗೆ ಹೋಗಿ ಮಾಡಿದ ತಿಂಡಿ ಯಾವುದು? - ಉಪ್ಪಿಟ್ಟು!! ಅವತ್ತಿನಿಂದ ಘಾ ಸಾಹೇಬರಿಗೆ ಹೆಂಡತಿಯನ್ನು ನೋಡಿದರೂ ಅಷ್ಟಕ್ಕಷ್ಟೆ.

ಶ್ರೀಮಾನ್-ಜೀ ಒಂದು ಸಲ ಘಾ ಜೊತೆ ಏನೋ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರಂತೆ, ಇಪ್ಪತ್ತು ವರ್ಷದ ಹಿಂದೆ. ಹಾಗೇ ಬಂದವರು ಲಾಲ್-ಬಾಗಿಗೂ ಒಂದು ಸುತ್ತು ಹೊಡೆದು ಸುಸ್ತಾಗಿ ಮಾವಳ್ಳಿ ಟಿಫಿನ್ ರೂಂ ನುಗ್ಗಿದರು. ಅರ್ಧ ದಿನ ಕಾದ ಮೇಲೆ ಒಳಗೆಹೋಗಿ ಕೂರಲು ಟೇಬಲು ಸಿಕ್ಕಿತು. "ಏನು ಬೇಕು?" ಅಂತ ಕೇಳಿದ ಸರ್ವರಿಗೆ "ಉಪ್ಪಿಟ್ಟು" ಅಂತ ಹೇಳಲು ಹೋಗಿ ಬಾಯಿತೆರೆದಿದ್ದ ಜೀಯವರ ಬಾಯಿಯನ್ನು ರಪ್ಪನೆ ಮುಚ್ಚಿ, " ದರಿದ್ರಾನ ಇಲ್ಲಾದರೂ ಬಿಡಯ್ಯ! ನಾನು ಆರ್ಡರ್ ಮಾಡ್ತೀನಿ ತಾಳು. ಅದನ್ನೇ ನೀನೂ ತಿನ್ನಬೇಕು" ಅಂತ ತಾಕೀತು ಮಾಡಿ, ಘಾ, ಸರ್ವರತ್ತ ತಿರುಗಿ ಕೇಳಿದರು: "ಏನಯ್ಯ ಇಲ್ಲಿನ ಸ್ಪೆಷಲ್ ಐಟಮ್ಮು?"

ಅವನು "ಖಾರಾಬಾತ್" ಅಂದ. ರಾಗೀಮುದ್ದೆ ದೇವೇಗೌಡರಿಗೆ ಇಟಾಲಿಯನ್ ರೆಸ್ಟೋರೆಂಟಿಗೆ ಹೋದರೆ ಹೇಗಾದೀತೋ ಹಾಗಾಯಿತು ಘಾ ಮಹಾಶಯರಿಗೆ. ಖಾರ ಇದೆ, ಬಾತ್ ಇದೆ! ರುಚಿಕಟ್ಟಾಗಿರುತ್ತೆ ಅಂತ ಮೂರು ಪ್ಲೇಟ್ ಆರ್ಡರ್ ಮಾಡಿದರು. ಮುಂದೆ ಆದದ್ದು ಬರೆದರೆ, ಓದಲು ನಿಮಗೇ ನಾಚಿಕೆಯಾದೀತು ಅಂತ ಇಷ್ಟಕ್ಕೇ ನಿಲ್ಲಿಸಿ ತರ್ಪಣ ಬಿಡುತ್ತೇನೆ!!

3 comments:

  1. Rohit...Nice to read ur blog articles....I can give a name to ur blog as "Blog with Reality"...cool...nice to read this haanji article and keep on posting...we keep on reading..thanks:-)

    ReplyDelete
  2. ಜೈ ಉಪ್ಪಿಟ್ಟೇ! ಏನಿದೇನಿದು ನಿನ್ನ ಮಹಿಮೆ, ದೇವೇಗೌಡರೂ ಚಿತ್ತಾದರು ನಿನ್ನ ಮು೦ದೆ! ಸಕತ್ತಾಗಿದೆ ಕಣ್ರೀ....:)

    ReplyDelete
  3. very nice article.. sajjige bajil is tasty item in south canara :)

    ReplyDelete