Tuesday, July 13, 2010

೧. ಕಾಲ್ಚೆಂಡು ಒದ್ದ ಮೇಲೆ..

ಅಂತೂ ಇಂತೂ ಫುಟ್ಬಾಲ್ ಜ್ವರ ಇಳೀತು. ಯಾಕಿಂಥ ದರಿದ್ರ ಆಟ ಆಡ್ತಾರೋ ಅಂತ ಗೊಣಗಾಡ್ತಾ ಇದ್ದ ಶ್ರೀಮಾನ್ ಜೀಯ ತಲೆನೋವೂ ಇಳೀತು. ಇಷ್ಟು ದಿನ ಟಿವಿಯಲ್ಲಿ ಬಡ್ಕೊಂದಿದ್ದೆ ಬಡ್ಕೊಂಡಿದ್ದು, ಏನು ಬಂತಪ್ಪ ಅವರಿಗೆ ಇದರಿಂದ? ದೊಡ್ಡ ಲೊಳಲೊಟ್ಟೆ ಅಂತ ಕೊನೆಯದಾಗಿ ಗೊಣಗಿ ಸುಮ್ಮನಾದರು.

"ಅಲ್ಲಾ ಸ್ವಾಮಿ, ಒಂದು ಬಾಲಿಗೋಸ್ಕರ ಹುಡುಗರು ಹುಚ್ಚುನಾಯಿ ಬೆನ್ನು ಹತ್ತಿದ ಹಾಗೆ ಯಾಕೆ ಒಡ್ಬೇಕೂ ಅಂತ! ಇದಕ್ಕೊಂದು ಪರಿಹಾರ ಇಲ್ಲವೇ? " ಅಂತ ಜೀಗಳ ಗೆಳೆಯ ಘಾ ಪ್ರಶ್ನೆ.

"ಇದೆ"

"ಏನು?"

"ಒಬ್ಬೊಬ್ಬರಿಗೂ ಒಂದೊಂದು ಬಾಲು ಕೊಟ್ಟು ಬಿಡೋದು", ಜೀ ಉತ್ತರ.

ತುಂಬಾ ಹಳೇ ಜೋಕೇ ಅನ್ನಿ. ಆದರೆ, ಘಾ ಕಾಲಕ್ಕೆ ಅದು ಹೊಸದು. ಆಗ ಈಗಿನಂತೆ ಹೊಸಹೊಸ ತಂತ್ರಜ್ಞಾನಗಳು ಇರಲಿಲ್ಲ. ಯಾವುದೋ ಒಂದು ಸಿಕ್ಕಿದ ನಿಕ್ಕರು ಬನಿಯನು ಹಾಕ್ಕೊಂಡು ಹುಡುಗರು ಮೈದಾನಕ್ಕೆ ಜಿಗಿಯುತ್ತಿದ್ದರು. ಬಾಲು ಹಿಡಿಯುವ ಗೌಜಿನಲ್ಲಿ ತಮ್ಮ ಬಾಲುಗಳಿಗೆ ಅಪಾಯ ತಂದುಕೊಳ್ಳುತ್ತಿದ್ದರು. ಗೋಲು ಕೀಪರು ಒಬ್ಬನೇ ಸಕಲಾಯುಧ ಸನ್ನದ್ಧನಾಗಿ ಸಕಲಕವಚಧಾರಿಯಾಗಿ ನಿಲ್ತಾ ಇದ್ದದ್ದು.

"ಆಡೋರು ಹುಡುಗರು. ನೋಡ್ತಾ ನಿಲ್ಲೋ ಅವನಿಗೇಕೆ ಇಂಥ ವೈಭವರೀ? " ಅಂತ ಘಾ ಕೇಳಿದರೆ, ಜೀ ತುಂಟತನದಿಂದ ಹೇಳೋರು: "ಓಡಾಡೋ ಹುಡುಗರಿಗೆಲ್ಲ ಕೈ-ಕಾಲು ಕವಚಗಳು ಕೊಟ್ರೆ ಅವಕ್ಕೆ ಹಾನಿಯಾಗೊಲ್ಲವೇ? ಅದಕ್ಕೇ ನಿಂತ ಅವನಿಗೆ ಉಡಿಸಿದ್ದಾರೆ."

ಜೀ ಮತ್ತು ಘಾ ಆಟೋಟದ ಯಾವ ತಲೆಬುಡ ಗೊತ್ತಿಲ್ಲದೆ, ಆದರೂ ಅದರ ಜ್ಞಾನ ಚೆನ್ನಾಗಿದೆ ಅಂತ ಫೋಸು ಕೊಟ್ಟುಕೊಂಡು ನೋಡುತ್ತಿದ್ದ ಕಾಲ ಅದು. ಒಂದೊಂದು ಸಲ ಟೀವಿಯಲ್ಲಿ , ಅಪರೂಪಕ್ಕೆ ಅಜ್ಜಿ ಹಡೆದ ಹಾಗೆ, ಫುಟ್-ಬಾಲಿನ ವಿವರ ತೋರಿಸುತ್ತಿದ್ದರು. ಮ್ಯಾಚು ಬಂದರೆ ಕಾಮೆಂಟರಿ ಇಲ್ಲ, ಕಾಮೆಂಟರಿ ಬಂದರೆ ಮ್ಯಾಚಿಲ್ಲ, ಅಂಥಾ ಗತಿ ಆಗಿನ ಕಾಲದ್ದು. ಹಾಗಾಗಿ ಚಿತ್ರಗಳು ಮಾತ್ರ ಮೇಲಿಂದ ಮೇಲೆ ಬರತಿದ್ದವೆ ಹೊರತು ಕಾಮೆಂಟರಿ ಗರಗರ ಉರುಲುತ್ತಿತ್ತು.

ಜೀಯ ಕಣ್ಣುಗುಡ್ಡೆಗಳು ಟಿವಿಯ ಒಳಹೋಗಿ ನಾಟಿಬಿಟ್ಟಿದ್ದವು. ತಾನೇನು ಕಮ್ಮಿ ಅಂತ ಘಾ, ಕತ್ತು ಮುಂಬಾಗಿಸಿ, ದೇಹವನ್ನು ಬಿಲ್ಲಿನಂತೆ ದಂಡಿಸಿ ವಿಚಿತ್ರ ಶೈಲಿಯಲ್ಲಿ ಕೂತು ನೋಡಿದರು. ಎದುರಾಳಿಗಳು ಧುಮ್ಮಿಕ್ಕಿ ಹೊಡೆದ ಬಾಲನ್ನು ಬಕಪಕ್ಷಿಯಂತೆ ಹಾರಿಹಿಡಿದು "ಬಡ್ಡೀಮಕ್ಳಾ ಮಾಡ್ತೀನಿ ನಿಮಗೆ!" ಅಂತ ಗೋಲುಕೀಪರು ಅವಡುಗಚ್ಚಿ ಎತ್ತಿ ಆಚಿನ ಗೋಲಿನತ್ತ ಎಸೆವ ದೃಶ್ಯ.

" !" ಅಂತ ಕುಪ್ಪಳಿಸಿದರು ಜೀ ಹುಜೂರ್.

"ಏನು?"

"ನೋಡ್ರೀ, ಎಂಥಾ ಸಿಕ್ಸರು!"

ಘಾ ಮುಗುಳ್ನಕ್ಕು ಬಯ್ದರು: "ನಿಮ್ ತಲೆ! ಸಿಕ್ಸರು ಬಾರ್ಸೋದು ಫುಟ್-ಬಾಲ್ ನಲ್ಲಿ! ಇದು ಕ್ರಿಕೆಟ್ಟು!"

**********************

ಜೀ ಹುಜೂರ್ ಮಗ ಜೀಮರಿ ಮಹಾನ್ ಫುಟ್-ಬಾಲ್ ಪ್ರೇಮಿ. ಆಟದ ಪಂದ್ಯಗಳು ಶುರುವಾಯ್ತು ಅಂದರೆ ಅವನು ಟೀವಿ ಮುಂದೆ "ಜೀ ಹುಜೂರ್". "ಗೋಲೆಷ್ಟಾಯ್ತೋ?" ಅಂದ್ರೆ "ಅಯ್ಯೋ ಸುಮ್ನೆ ಹೋಗೀಪ್ಪ. ನಿಮಗ್ಯಾಕೆ ಅದರ ಚಿಂತೆ" ಅಂತ ಗದರಿ ಕಳಿಸುತ್ತಾನೆ. ಭಗವದ್ಗೀತೆ ಕವರು ಹಾಕ್ಕೊಂಡು ದೆಬೋನೀರು ಓದಿದ ಹಾಗೆ ಪೋಲಿ ಮುಂಡೆದಕ್ಕೆ ಇರುವ ಯೋಚನೆಗಳೇ ಬೇರೆ. ಫುಟ್-ಬಾಲಿನ ನೆಪದಲ್ಲಿ ಪ್ರೇಕ್ಷಕರಂಗಣದಲ್ಲಿ ಯಾವ ಯಾವ ಬಿಳೀ ಹುಡುಗಿಯರು ಎಷ್ಟೆಷ್ಟು ಇಂಚು ಬಟ್ಟೆ ಹಾಕಿದ್ದಾರೆ ಅಥವ ಹಾಕಿಲ್ಲ, ಎಲ್ಲೆಲ್ಲಿ ಏನೇನು ಇದೆ ಅಥವ ಇಲ್ಲ- ಇವುಗಳನ್ನಷ್ಟೇ ಈತ ಕಣ್ಣಗಲಿಸಿ ನೋಡೋದು ಅಂತ ಗೊತ್ತಿಲ್ಲ ಯಾರಿಗೂ.. ಯಾರೋ ಹೇಳಿದ್ದರಂತೆ: "ಫುಟ್-ಬಾಲ್ ಆಟ ಏನು ಮಜಾ ಇರುತ್ತೆ ಮಾರಾಯ! ಯಾವ ಕ್ಷಣದಲ್ಲಿ ಯಾವ ಮೂಲೆಯಿಂದ ಜನ ಬತ್ತಲೆ ಓಡೋಕೆ ಶುರು ಮಾಡ್ತಾರೋ ಹೇಳಕ್ಕಾಗಲ್ಲ!" ಅಂತ. ಅವತ್ತಿಂದ ಹುಡುಗ ಕಾಲ್ಚೆಂಡು ದಾಸ.

ಜೀಮರಿ ಟೀವಿಯ ಎದುರು ಕೈಕಾಲು ಆಡಿಸ್ತ ಕೂತು ಕಳ್ಳೆಪುರಿ ಜಗಿಯತೊಡಗಿದರೆ, ಅವರಮ್ಮನಿಗೆ ಮೈಯೆಲ್ಲಾ ಉರಿ. "ಮುಂಡೇದು, ಓದು ಬರೆಯೋದೆಲ್ಲ ಬಿಟ್ಟು ಹಾಳು ಪರಂಗಿತಿಕಗಳನ್ನು ನೋಡುತ್ತಲ್ಲ!" ಅಂತ ಬಾಯಗಲಿಸಿ ಬೈತಾರೆ. "ಯಾವ ಹುತ್ತದಲ್ಲಿ ಯಾವ ಹಾವಿರುತ್ತೋ ಹೇಳಕ್ಕಾಗುತ್ಯೆ? ಪ್ಹೇಯ್ಲಿನ ಮೇಲೆ ಪ್ಹೇಯ್ಲಾಗಿ ಬಿದ್ದು ಮಣ್ಣು ಮುಕ್ಕಿದರೂ ಸಚಿನ್ ತೆಂಡೂಲ್ಕರ್ ಕೋಟ್ಯಧೀಶ ಆಗಿಲ್ಲವೇ!" ಅಂತ ಹೊಟ್ಟೆಯ ಬೆಂಕಿಗೆ ತುಪ್ಪ ಸುರಿಯುವವರು ಸುತ್ತಲೂ ಬೇಜಾನ್ ಇರುವುದರಿಂದ ಜೀಮರಿ ಖುಷ್!

"ಅದೂ ಹೌದನ್ನಿ. ಈಗ ಯಾವ ನೀರಲ್ಲಿ ಯಾವ ಆಕ್ತೊಪಸ್ಸೋ ಅಂತ ಹೇಳುವ ಹಾಗಾಗಿದೆ. ನೋಡಿ ಎಂಟು ಕಾಲಿನ ಪ್ರಾಣಿಗೂ ಕಾಲ್ಚೆಂಡಿನ ಆಟಕ್ಕೂ ಎಲ್ಲಿಂದೆಲ್ಲಿಯ ಸಂಬಂಧ. ಆದರೂ, ಈಗ ಅದರ ಭವಿಷ್ಯ - ಆಟದ ದೆಸೆಯಿಂದ ಹೇಗೆ ಎಲ್ಲಿಗೆ ಹೋಗಿ ನಿಂತಿದೆ!" ಅಂತ ಘಾ ಒಗ್ಗರಣೆ ಬೇರೆ!

"ಅದೇನ್ರೀ ಅದು ಆಕ್ತೊಪಸ್ಸು?", ಜೀಗಳು ಸ್ವಲ್ಪ ನಿಧಾನ, ಇಂಥ ವಿಚಾರಗಳಲ್ಲಿ.

"ಅದೇರೀ, ಅಷ್ಟಪದಿ ಅಂತೀವಲ್ಲ ನಾವು. ಹಿಡ್ಕೊಂಡ್ರೆ ಬಿಡಲ್ಲ ಅಂತಾರೆ. ಒಂಥರಾ ವಿಚಿತ್ರ, ಭಯಂಕರ, ರಣಹಿಂಸೆ...."

"ಅಂದರೆ ಸಪ್ತಪದಿ ಥರ ಅನ್ನಿ!"

"ಅಬ್ಬ, ಅರ್ಥ ಆಯ್ತಲ್ಲ ನಿಮಗೆ! ಅಂಥಾದ್ದೆ ಒಂದು ಪ್ರಾಣಿ. ಯಾವ ಮ್ಯಾಚು ಯಾರು ಗೆಲ್ತಾರೆ ಅಂತ ಹೇಳ್ತಂತೆ. ಹೇಳಿದ್ದೆಲ್ಲ ಸರಿಯಾಗಿ, ಅದರ ಲಕ್ಕು ಖುಲಾಯ್ಸಿಬಿಟ್ಟಿದೆ ಕಾಣ್ರೀ!"

"ಸುಳ್ಳು ಹೇಳಿದ್ರೆ ಕಾಲು ಮುರಿಯೋದಿಲ್ವೆ ಜನ!"

"ಅದೂ ಹೌದನ್ನಿ, ನಮ್ಮವರ ಹಾಗಲ್ಲ ಬಿಳೀ ಜನ. ಸುಳ್ಳು ಹೇಳಿದ್ರೆ "ಕಿಕ್ ಬಕೆಟ್" ಮಾಡಿಸ್ತಾರೆ! ನಮ್ಮ ಜೋಯಿಸ್ರೂ ಯಾರೋ ಒಬ್ರು ಫುಟ್-ಬಾಲ್ ಭವಿಷ್ಯ ಹೇಳ್ತೀನಿ ಅಂತ ಬಂದ್ರು. ಎಂದೆರಡು ಹೇಳಿದ್ರು ಕೂಡ. ಯಾಕೋ ಹೇಳಿದ್ದು ಉಲ್ಟಾ ಹೊಡೆದಮೇಲೆ, ಕೆಲವೊಂದು ಗ್ರಹಗಳು ಜಾತಕದಲ್ಲಿ ಸರಿಯಾಗಿ ಕಾಣಿಸ್ತಿಲ್ಲ" ಅಂತ ತಿಪ್ಪೆ ಸಾರಿಸಿ ಮೌನವೃತ ಮಾಡಿದ್ರು"

"ಹಾಗೂ ಇರಬಹುದು ಬಿಡಿ. ಇಲ್ಲಿನ ಗ್ರಹಗಳೇ ಬೇರೆ, ಪರಂಗಿ ದೇಶದ ಗ್ರಹಗಳೇ ಬೇರೆ. ಅಲ್ವೇ!" ಅಂತ ಜೀ ಸಮಜಾಯಿಷಿ. ಜೀಗೆ ಜಾತಕ, ಕುಂಡಲಿಯಲ್ಲೆಲ್ಲ ಬಹಳ ನಂಬಿಕೆ; ಗೌಡರಿಗೆ ಕೊಲ್ಲೂರಮ್ಮನ ಮೇಲೆ ಇದ್ದ ಹಾಗೆ.

"ಅಲ್ಲಾ ಒಂದು ಮಾತು ಹೇಳ್ತೀನಿ. ದೇಶದಲ್ಲಿ ನೂರಿಪ್ಪತ್ತು ಕೋಟಿ ಜನ ಇದೀವಿ. ಒಂದು ಫುಟ್-ಬಾಲ್ ಟೀಮ್ ಕಟ್ಟೋ ಹನ್ನೆರಡು ಜನ ಸಿಗಲ್ಲವೇ? ನಾಚಿಕೆಗೇಡು!" ಅಂದರು ಘಾ. ಅವರು ಉಗ್ರ ರಾಷ್ಟ್ರವಾದಿ. ಯಾವುದೇ ಇರಲಿ, ಅದು ಪ್ರಸಿದ್ಧವಾದರೆ, ಅದು ನಮ್ಮದೇಶದಲ್ಲೂ ಇರಬೇಕು ಅನ್ನುವ ಅಭಿಪ್ರಾಯ ಅವರದ್ದು.

"ಆಡೋರು ಇದ್ದಾರೆ. ಆದರೆ ಆಡಕ್ಕೆ ಜನ ಬಿಡಬೇಕಲ್ಲ!" ಅಂತ ಜೀ ವಾದ.

"ಅದ್ ಹೇಗ್ರೀ ಹೇಳ್ತೀರಾ? ಆಡ್ತೀನಿ ಅಂದ್ರೆ ತಡೆಯೋರು ಯಾರು?", ಘಾ ಹುಬ್ಬು ಪ್ರಶ್ನಾರ್ಥಕ.

"ಅದ್ಯಾರೋ ಸ್ವಾಮಿಗಳು ಫುಟ್-ಬಾಲ್ ಆಡಕ್ಕೆ ಹೋಗೀ.."

"ಥೂ ನಿಮ್ಮ! ಅದಲ್ರೀ. ನಾನ್ ಹೇಳ್ತಾ ಇರೋದು ನಿಜವಾದ ಆಟ, ಮೈದಾನದಲ್ಲಿ.."

"ನಾನೂ ಅದನ್ನೇ ಹೇಳ್ದೆ ತಾನೇ?"

"ಮೈ-ದಾನ ಅಲ್ಲ! ಮೈದಾನರೀ.. ಥೂ ನಿಮ್ಮ ಪೋಲಿ ತಲೆಗೊಂದಿಷ್ಟು ಬೆಂಕಿ ಹಾಕ!", ಘಾ ಉಗಿದು ಎದ್ದು ಟೀವಿಯಲ್ಲಿ ನ್ಯೂಸ್ ಚಾನೆಲ್ ತಿರುಗಿಸಿ ಕೂತರು.

"ವಕ ವಕ ವಕ" ಅಂತ ಶಕೀರ ಹೊಟ್ಟೆ ತೋರಿಸಿ ಸೊಂಟ ತಿರುಗಿಸುವ ಹಾಡು ಬಂತು. "ಮುಂದಿನ ಆಯ್.ಪಿ.ಎಲ್. ಮ್ಯಾಚಿಗೆ ನಮ್ಮಲ್ಲೂ ಹೀಗೆ ಒಂದು ಹಾಡು ಹಾಕಿಸಿ ಕುಣಿಸ್ತಾರಂತೆ" ಅಂದ ಜೀಮರಿ ಖುಷಿಯಾಗಿ.

"ಯಾರಿಂದಪ್ಪ? ಹುಡುಗಿಯಿಂದಾನೆ?"

"ಅಲ್ಲ, ನಮ್ಮಲ್ಲಿ ಇಲ್ಲವೇ ಶಕೀಲ? ಅವಳ ಮುಂದೆ ಶರೀರ ಯಾವ ಲೆಕ್ಕ!" ಅಂತ ಕಿಚಾಯಿಸಿ ಓಡಿತು ಮರಿ.

ಗೊಳಗೊಳ ನಕ್ಕು " ಹುಡುಗರು ಎಷ್ಟು ಫಾಸ್ಟ್ ನೋಡಿ!" ಅಂತ ಮೆಚ್ಚುಗೆ ಸೂಚಿಸಿ ಘಾ, ಟೀವಿ- ಹಾಕಿದರು. ನಾಳೆ ಆಗುವ ದುರಂತಗಳನ್ನೂ ಇವತ್ತೇ ತೋರಿಸಿ ಬೆಚ್ಚಿಬೀಳಿಸುವ ಅಚ್ಚಕನ್ನಡದ ವಾರ್ತಾವಾಹಿನಿ ಇದು. ಅಲ್ಲಿ ಅವರು ಶಿಲ್ಪಾ ಶೆಟ್ಟಿಯ ಸಂದರ್ಶನ ಮಾಡುತ್ತಿದ್ದರು. ಆಕೆ ತನ್ನ ಯೋಗಸಿದ್ಧ ದೇಹವನ್ನು ಬಳ್ಳಿಯಂತೆ ಬಳುಕಿಸುತ್ತ "ಆಕ್ತೊಪಸ್ಸ್! ಯಂಕ್ಲಾ ಅಂಚಿತ್ತಿನ ಒಂಜಿ ಜೆಂಜಿ ಬೋಡು. ಕುಡ್ಲ
ಡ್ ಸಿಕ್ಕುಂಡ ತೂವೊಡು" ಎಂದು ಮೈಕ್ ಮುಂದೆ ಹೇಳಿ ಕಿಲಕಿಲ ನಕ್ಕಳು. ತುಳು ಬರುವ ಘಾ ಹೊಟ್ಟೆ ಹಿಡಕೊಂಡು "ಘಾ ಘಾ" ನಕ್ಕರು. ತುಳು ಬರದ ಜೀ ಅವರ ಮುಖ ನೋಡಿ ಪೆಚ್ಚಾಗಿ ಕೂತರು.
**********************************************************

No comments:

Post a Comment